ನಲಿ-ಕಲಿ ಒಂದು ಉತ್ತಮ ಯೋಜನೆ ಏಕೆ? ಹೇಗೆ? ಮತ್ತು ಶಿಕ್ಷಕರ ಪಾತ್ರ.
ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಯಾವುದು ಉತ್ತಮ? ಎಂದು ಯಾರನ್ನಾದರೂ ಪ್ರಶ್ನಿಸಿದರೆ ಖಾಸಗಿ ಶಾಲೆ ಉತ್ತಮ ಎನ್ನುವವರ ಸಂಖ್ಯೆ ಹೆಚ್ಚು ಆದರೆ ನನ್ನ ವಾದವೇನೆಂದರೆೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಇಂದು ಎಸ್. ಎಸ್. ಎ. ಅಡಿಯಲ್ಲಿ ಎಲ್ಲ ಸರಕಾರಿ ಶಾಲೆಗಳು ಉತ್ತಮ ಸೌಲಭ್ಯಗಳನ್ನು ಖಾಸಗಿ ಶಾಲೆಗಳಂತೆಯೇ ಹೊಂದಿವೆ. ಆದರೆ ಉತ್ತಮ ಶಿಕ್ಷಕರು ಉತ್ತಮ ಬೋಧನಾ ವಿಧಾನ, ವರ್ತಮಾನಕ್ಕೆ ತಕ್ಕಂತೆ ತರಬೇತಿಗಳು ಈ ವಿಷಯದ ಪ್ರಶ್ನೆ ಬಂದಾಗ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉನ್ನತ ಮಟ್ಟದಲ್ಲಿವೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಆದರೂ ಇದು ಪೋಷಕರಿಗೆ ಅರ್ಥವಾಗುತ್ತಿಲ್ಲ.
ನಲಿ- ಕಲಿ ಅಂಥಹ ಒಂದು ಅತ್ಯುತ್ತಮ ಕಲಿಕಾ ಪದ್ಧತಿ (ಬೋಧನಾ ವಿಧಾನವೂ ಹೌದು) ಸರಕಾರಿ ಶಾಲೆಗಳಲ್ಲಿ ಅಳವಡಿಸಿ 5-6 ವರ್ಷಗಳೇ ಕಳೆದವು. ಅದರ ಪ್ರಾರಂಭದಿಂದ ಈ ವರೆಗೆ ನಾನು ಸುಮಾರ ತರಬೇತಿಗಳನ್ನು ಪಡೆದಿದ್ದೇನೆ. ಜೊತೆಗೆ ನಮ್ಮ ಚಿಕ್ಕೋಡಿ ಬ್ಲಾಕಿನ ನೂರಾರು ಶಿಕ್ಷಕರಿಗೆ ಮತ್ತು ಮುಖ್ಯೋಪಾಧ್ಯಾಯರಿಗೆ ತರಬೇತಿಗಳನ್ನು ನೀಡಿದ್ದೇನೆ. ವರ್ಗಕೋಣೆಯಲ್ಲಿ ನಲಿ-ಕಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ನನ್ನ ಅನುಭವದ ಆಧಾರದ ಮೇಲೆ ಈ ಯೋಜನೆಯು ಏಕೆ ಉತ್ತಮ? ಹೇಗೆ ಸಹಕಾರಿ ಮತ್ತು ಶಿಕ್ಷಕರ ಪಾತ್ರದ ಕುರಿತು ಈ ಲೇಖನದ ಮೂಲಕ ತಮ್ಮ ಗಮನಕ್ಕೆ ತರಬಯಸುತ್ತೇನೆ.
ನಲಿ-ಕಲಿ ಯೋಜನೆ ಜಾರಿಯಾಗುವ ಪೂರ್ವ ಕಲಿ-ನಲಿ ಪದ್ಧತಿ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ 1-3 ನೇ ತರಗತಿಗಳಲ್ಲಿ ಏಕರೂಪದಲ್ಲಿಯೇ ಇತ್ತು. ನಲಿ-ಕಲಿ ಬಂದು 5 ವರ್ಷಗಳೇ ಕಳೆದರೂ ಇಂಥ ಒಂದು ಯೋಜನೆಯ ಲಾಭ ಕೇವಲ ಸರಕಾರಿ ಶಾಲಾ ಮಕ್ಕಳಿಗೆ ಮಾತ್ರ ಲಭಿಸುತ್ತಿರುವುದು ಸಂತೋಷದ ಸಂಗತಿಯೂ ಹೌದು ಮಕ್ಕಳ ದೃಷ್ಡಿಯಿಂದ ಖಾಸಗಿ ಶಾಲೆಯ ಮಕ್ಕಳ ದುರದೃಷ್ಟಕರವೂ ಹೌದು.
ನಲಿ-ಕಲಿಯಲ್ಲಿ ಮಕ್ಕಳು ಸ್ವವೇಗದ ಮೂಲಕ ಕಲಿಯುತ್ತಾರೆ, ಸಂತಸದೊಂದಿಗೆ ಕಲಿಯುತ್ತಾರೆ, ಬಹುವರ್ಗದಲ್ಲಿ ಕಲಿಯುತ್ತಾರೆ. ಆಡುತ್ತ ನಲಿಯುತ್ತ ತಮ್ಮದೇ ಮೆಟ್ಟಿಲುಗಳನ್ನು ಒಂದೊಂದಾಗಿ ಏರಿ ಖುಷಿ ಪಡುತ್ತಾರೆ. ಪ್ರಾರಂಭದ ದಿನಗಳಲ್ಲಿ ಶಿಕ್ಷಕರು ಇದನ್ನು ವಿರೋಧಿಸಿದರು, ನಂತರ ಅನಿವಾರ್ಯ ಅಂದುಕೊಂಡರು, ನಂತರ ಇರಲಿ ಪರವಾಗಿಲ್ಲವೆಂದುರು, ಈಗ ಇದೇ ಒಳ್ಳೆ ಪದ್ಧತಿ, ಕಡಿಮೆ ಶ್ರಮ ಹೆಚ್ಚು ಕಲಿಕೆ ಎಂದು ಒಪ್ಪಿಕೊಂಡರು. ಇದು ಒಳ್ಳೆಯ ವಿಷಯ ಹಾಗಾಗಿ ನಾನು ನಮ್ಮ ಇಲಾಖೆಯ ಪರವಾಗಿ ನನ್ನ ಎಲ್ಲ ನಲಿ-ಕಲಿ ಶಿಕ್ಷಕ/ಕಿ ವೃತ್ತಿ ಬಾಂಧವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ನಲಿ-ಕಲಿ ಪದ್ಧತಿಯು ಏಕೆ ಉತ್ತಮ? ಮತ್ತು ಹೇಗೆ ಭಿನ್ನ?
ಖಾಸಗಿ ಶಾಲೆಗಳಲ್ಲಿ ಭಾಷೆ ಕಲಿಸುವುದು ವರ್ಣಮಾಲೆಗಳನ್ನು ಅ ಆ ಇ ಈ . . . . ಹ ಳ ಕ್ಷ ಜ್ಞ ಸಾಂಪ್ರದಾಯಿಕ ಪದ್ಧತಿಯಲ್ಲಿ ಇದರಿಂದ ಮಕ್ಕಳು ಕೇವಲ ಕಂಠಪಾಠ ಪದ್ಧತಿಯಲ್ಲಿ ಅಕ್ಷರಗಳನ್ನು ನೆನಪಿಟ್ಟುಕೊಳ್ಳುತ್ತಾರೆಯೇ ಹೊರತು ಕಲಿಕೆ ಗಟ್ಟಿಗೊಳ್ಳುವುದಿಲ್ಲ, ಆದರೆ ನಲಿ-ಕಲಿ ಪದ್ಧತಿಯಲ್ಲಿ ಹಾಗಿಲ್ಲ. ವರ್ಣಮಾಲೆಗಳನ್ನು ಒಂದನೇ ತರಗತಿಗೆ 10 ಮೈಲುಗಲ್ಲುಗಳಲ್ಲಿ 1) ರ ಗ ಸ ದ ಅ, 2) ಜ ವ ಮ ಬ ನ . . . ಹೀಗೆ ಅಕ್ಷರಗಳನ್ನು ಆಕಾರವಾರು ಜೋಡಿಸಿ ಕಲಿಸಲಾಗುತ್ತದೆ, ಒಂದೊಂದೆ ಅಕ್ಷರ ಪರಿಚಯಿಸಿ, ಬೆರಳಾಡಿಸಿ, ವಾಲ್ ಸ್ಲೇಟ್ ಮೇಲೆ ಬರೆಸಿ, ನೋಟ್ ಬುಕ್ ನಲ್ಲಿ ಬರೆಸಿ, ಅಭ್ಯಾಸ ಪುಸ್ತಕದಲ್ಲಿ ಬರೆಸುತ್ತ ಪ್ರತಿ ಮೈಲುಗಲ್ಲಿನ ಐದು/ ಆರು ಅಕ್ಷರಗಳನ್ನೆ ಬಳಸಿ ರಚಿಸಬಹುದಾದ ಶಬ್ದ, ವಾಕ್ಯ ರಚನೆ ಎಲ್ಲವೂ ಮೆಟ್ಟಿಲುಗಳವಾರು ಆಡುತ್ತಾ ಕಲಿಯುವಂತೆ ಜೋಡಿಸಿರುವುದು ವಿಶೇಷ ಮತ್ತು ಮಕ್ಕಳ ಕಲಿಕೆಗೆ ಪೂರಕ, ಪ್ರೇರಕ. ಇಂಥಹ ಕಲಿಕೆ ಗಟ್ಟಿಗೊಂಡು ಶಾಶ್ವತವಾಗಿ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ. ಇನ್ನು ಎರಡನೇ ತರಗತಿಗೆ ಕಾಗುಣಿತದ ಕೆಲವು ಅಕ್ಷರ, ಶಬ್ದ ಮತ್ತು ಒತ್ತಕ್ಷರಗಳ ಪರಿಚಯ ಮಾಡಿರುವುದು ನಿಜಕ್ಕೂ ಮೆಚ್ಚುವಂತದ್ದು., ಜೊತೆಗೆ ಮೂರನೇ ತರಗತಿಗೆ 11 ಮೈಲುಗಲ್ಲುಗಳಲ್ಲಿ 11 ಪಾಠಗಳನ್ನು ನೀಡಿದ್ದು ನಾಲ್ಕು/ ಐದು ಘಟಕ/ಹಂತಗಳಲ್ಲಿ ಒಂದು ಪಾಠ ಸಾಗುವುದು ಯಾವ ಮುಂದುವರೆದ ಖಾಸಗಿ ಶಾಲೆಯ ಶಿಕ್ಷಕರಿಗೂ ಗೊತ್ತಿರದ ಪದ್ಧತಿ. ಮತ್ತು ಇದು ಭಾಷಾ ಬೋಧನೆಯ ಅತ್ಯುತ್ತಮ ಪದ್ಧತಿ. ಇಂಥಹ ಬೋಧನಾ ಪದ್ಧತಿ ಕುರಿತು ಡಿ.ಇಡಿ. ತರಬೇತಿಗಳಲ್ಲಿಯೂ ಹೇಳಿಕೊಟ್ಟಿಲ್ಲ.
ಗಣಿತ ವಿಷಯಕ್ಕೆ ಬಂದರೆ ಇಲ್ಲಿಯೂ ನಮ್ಮ ಶಾಲೆಗಳೂ ಖಾಸಗಿ ಶಾಲೆಗಳಿಗಿಂತ ಎತ್ತರದ ಸ್ಥಾನದಲ್ಲಿ ನಿಲ್ಲುತ್ತವೆ, ಕಾರಣ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಗೆ ಬಂದ ಮಗುವುಗೆ ನೇರವಾಗಿ 1 ರಿಂದ 100 ರ ವರೆಗೆ ಅಂಕಿ ಸಂಖ್ಯೆಗಳನ್ನು, ಮಗ್ಗಿಗಳನ್ನು ಮೌಖಿಕವಾಗಿ ಮತ್ತು ಲಿಖಿತವಾಗಿ ಒತ್ತಾಯ ಪೂರ್ವಕವಾಗಿ ಹೇಳಿ ಕಂಠಪಾಠ ಮಾಡಿಸಿಲಾಗುತ್ತದೆ, ಬರೆಯದಿದ್ದರೆ ಶಿಕ್ಷಿಸಲಾಗುತ್ತಿದೆ ಇದು ಎಷ್ಟೊಂದು ಅವೈಜ್ಞಾನಿಕ ಪದ್ಧತಿ ಅಲ್ಲವೇ? ಅದೇ ನಮ್ಮ ಸರಕಾರಿ ಶಾಲೆಗಳಲ್ಲಿ ನೋಡಿ, ನಲಿ-ಕಲಿ ಪದ್ಧತಿಯಲ್ಲಿ ಒಂದನೆ ತರಗತಿ ಮಗುವಿಗೆ ಮೊದಲು 1 ರಿಂದ 5 ಅನ್ನು ಒಂದೊಂದಾಗಿ ಪರಿಚಯಿಸಿ, ಬೆರಳಾಡಿಸಿ, ವಾಲ್ ಸ್ಲೇಟ್ ಮೇಲೆ ಬರೆಸಿ ಈ ಐದೂ ಅಂಕಿಗಳನ್ನು ಒಳಗೊಂಡಂತೆ ಹೆಚ್ಚು ಕಡಿಮೆ ಸಮ, ಹಿಂದೆ ಮುಂದೆ ಮಧ್ಯ, ಏರಿಕೆ ಇಳಿಕೆ, ಕನಿಷ್ಠ ಗರಿಷ್ಠ, ಸಂಕಲನ ಮತ್ತು ವ್ಯವಕಲನ ಮಾಡಿಸಲಾಗುತ್ತದೆ. ಈ ಮೇಲಿನ ಎಲ್ಲವೂ ಮೊತ್ತ/ ವ್ಯತ್ಯಾಸ 5 ಕ್ಕೆ ಮೀರದಂತೆ ಇರುತ್ತದೆ. ಇದೇ ರೀತಿ 6 ರಿಂದ 9 ಮತ್ತು ಸೊನ್ನೆ ಪರಿಕಲ್ಪನೆ, ನಂತರ 10 ರ ಪರಿಕಲ್ಪನೆ, ಅದಾದ ನಂತರ 11 ರಿಂದ 19 ರ ವರೆಗೆ ಹೀಗೆ ಹಂತವಾರು ಸಾಗುತ್ತದೆ. ಎರಡನೇ ತರಗತಿಗೆ 1 ರಿಂದ 50 ರ ವರೆಗೆ ಮೂರನೇ ತರಗತಿಗೆ 1 ರಿಂದ 100 ರ ವರೆಗೆ ಹೀಗೆ ಕಲಿಕೆ ಸಾಗುತ್ತದೆ. ಇಷ್ಟೊಂದು ವ್ಯವಸ್ಥಿತ ಕಲಿಕೆ ಜಗತ್ತಿನ ಮತ್ಯಾವ ಕಲಿಕಾ ಪದ್ಧತಿಯಲ್ಲಿಯೂ ಸಾಧ್ಯವಿಲ್ಲ ಎನಿಸುತ್ತದೆ. ಇದನ್ನು ಶಿಕ್ಷಕರಿಗೆ ಕರಗತ ಮಾಡಲು ಸಾಕಷ್ಟು ತರಬೇತಿ ಅವಶ್ಯಕವಿತ್ತು, ಇಲಾಖೆ ಎಲ್ಲಾ ರೀತಿಯ ತರಬೇತಿಯನ್ನು ನೀಡಿ ಸುಸಜ್ಜಿತ ತರಬೇತಿ ಹೊಂದಿದ ಶಿಕ್ಷಕರನ್ನು ಸೃಜಿಸಿದೆ. ಇದು ಖಾಸಗಿ ಶಾಲೆಗಳಲ್ಲಿ ಸಾದ್ಯವೇ?!
ಪರಿಸರ ಅಧ್ಯಯನದಲ್ಲಿ ಅಂತೂ ಎಲ್ಲವೂ ಚಟುವಟಿಕೆ ಮೂಲಕ ನೈಜ ಅನುಭವದೊಂದಿಗೆ ಜ್ಞಾನವನ್ನು ಕಟ್ಟಿಕೊಳ್ಳಲು ಅವಕಾಶ ಸೃಜಿಸಲಾಗಿದೆ. ಈ ಎಲ್ಲ ಅಂಶಗಳನ್ನು ವಿಸ್ತೃತವಾಗಿ ಹೇಳಬೇಕಾದರೆ ಪುಟಗಳ ವ್ಯಾಪ್ತಿ ಮೀರುತ್ತದೆ ಯಾಕೆಂದರೆ ಇದು 9 ದಿನಗಳ ತರಬೇತಿ, ಸುಧೀರ್ಘ ತರಬೇತಿ ಕೊಟ್ಟರು ಮುಗಿಯದರೂ ಅರ್ಥವಾಗದ ವಿಷಯ! ಅರ್ಥವಾದರೆ ಮರೆಯದ ಮತ್ತು ಇಷ್ಟವಾಗುವ ಪದ್ಧತಿ ಮತ್ತು ಜೊತೆಗಿದ್ದು ಮಕ್ಕಳ ಸವರ್ಾಂಗೀಣ ಅಭಿವೃದ್ಧಿಗೆ ಸಹಾಯಕವಾಗಿ ನಿಲ್ಲುವ ಯೋಜನೆ!
ಶಿಕ್ಷಕರ ಪಾತ್ರ :
ನಲಿ-ಕಲಿ ಯೋಜನೆಯ ಯಶಸ್ವಿಯಾಗಿದೆ ಎನ್ನುವುದಾದರೆ ಅದರ ಶ್ರೇಯಸ್ಸು ಶಿಕ್ಷಕರಿಗೆ ಸಲ್ಲಬೇಕಾದದ್ದು ಅಂತೂ ನಿಜ! ಯಾಕೆಂದರೆ ಎಲ್ಲ ಯೋಜನೆಗಳ ಯಶಸ್ಸು ಶಿಕ್ಷಕರು ಸಕಾರಾತ್ಮಕವಾಗಿ ಸ್ವೀಕರಿಸುವುದರೊಂದಿಗೆ ಸಕ್ರೀಯವಾಗಿ ತೊಡಗಿಸಿಕೊಳ್ಳುವುದನ್ನು ಅವಲಂಭಿಸಿದೆ. ಅಷ್ಟರ ಮಟ್ಟಿಗೆ ಶಿಕ್ಷಕರು ಧನ್ಯರು. ಒಂದು ವೇಳೆ ರಾಜ್ಯಾದ್ಯಂತ ಈ ಯೋಜನೆ ಗಣನೀಯ ಕುಸಿತ ಖಂಡಿದೆ ಎನ್ನುವುದಾದರೆ ಅದರ ಹೊಣೆಯನ್ನು ಮೊದಲು ಶಿಕ್ಷಕರು ಮತ್ತು ಎರಡನೇಯದಾಗಿ ಅನುಷ್ಠಾನಧಿಕಾರಿಗಳು ವಹಿಸಿಕೊಳ್ಳಬೇಕಾಗುತ್ತದೆ ಜೊತೆಗೆ ಸಾಮಗ್ರಿಗಳು ಸರಿಯಾಗಿ ಪೂರೈಕೆ ಆಗದೆ ಇರುವುದು, ಮೇಲ್ವಿಚಾರಣೆ ಮಾಡದೇ ಇರುವುದು ಕೂಡ ಕಾರಣವೆನ್ನಬೇಕಾಗುತ್ತದೆ.
ಒಟ್ಟಿನಲ್ಲಿ ನಲಿ-ಕಲಿ ಒಂದು ಉತ್ತಮ ಯೋಜನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇತ್ತೀಚಿನ ದಿನಗಳಲ್ಲಿ ಅದು ನಿರ್ಲಕ್ಷಕ್ಕೆ ಒಳಗಾಗಿದೆ ಎನ್ನುವುದೂ ಸತ್ಯ, ಮೂರನೇ ತರಗತಿಗೆ ನಲಿ-ಕಲಿ ವಿಸ್ತರಿಸಿದ್ದು ಒಂದು ದೃಷ್ಠಿಯಿಂದ ಸರಿ ಎನಿದರೂ ಸಾಕಷ್ಟು ಶಿಕ್ಷಕರು ಅದನ್ನು ವಿರೋಧಿಸಿದ್ದಾರೆ, ಅದಕ್ಕೆ ಸಾಕಷ್ಟು ಕಾರಣಗಳೂ ಇವೆ, ನಾಲ್ಕನೇ ತರಗತಿಗೆ ವಿಸ್ತರಿಸುತ್ತಾರಾ? ವಿಸ್ತರಿಸಬೇಕಾ? ವಿಸ್ತರಿಸುವುದು ಎಷ್ಟರಮಟ್ಟಿಗೆ ಸರಿ? ಹಾಗೊಂದು ವೇಳೆ ವಿಸ್ತರಿಸಿದರೇ ಏನೇನು ತೊಂದರತೆಗಳಾಗಬಹುದು? ಪರಿಹಾರಗಳೇನು ಎಲ್ಲವೂ ನಿಗೂಢವಾಗಿಯೇ ಉಳಿದಿವೆ. ಅದೇನೆ ಇರಲಿ ನಾನೊಬ್ಬ ಶಿಕ್ಷಕನಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಹೇಳುವುದೇನೆಂದರೆ ಮೂರನೆ ತರಗತಿಗೆ ನಲಿ ಕಲಿ ವಿಸ್ತರಿಸಿರುವುದರಿಂದ 1 ಮತ್ತು 2 ನೇ ತರಗತಿಯ ಮಕ್ಕಳತ್ತ ಶಿಕ್ಷಕರ ಗಮನ ಕಡಿಮೆಯಾಗಿ ಕಲಿಕೆ ಕುಂಟಿತಗೊಂಡಿದ್ದಂತು ನಿಜ. ಮುಂದಿನ ದಿನಗಳಲ್ಲಿ ಇಲಾಖೆ ಈ ಕುರಿತು ಸಾಕಷ್ಟು ಚಿಂತನಗಳನ್ನು ಮಾಡಿ ನಿಧರ್ಾರ ಕೈಗೊಳ್ಳಲಿ, ಏನೇ ನಿಧರ್ಾರ ಕೈಗೊಳ್ಳುವ ಮುನ್ನ ನನ್ನ ಸಲಹೆ ಏನೆಂದರೆ, ನಮ್ಮಲ್ಲಿರು ಎಲ್ಲ ಮಾನವ ಸಂಪನ್ಮೂಲವೂ ಅತ್ಯುತ್ತಮ ಸಂಪನ್ಮೂಲವಲ್ಲ, ಅವರನ್ನೆ ಬಳಸಿ ಈ ಯೋಜನೆ ಯಶಸ್ವಿ ಮಾಡಬೇಕು. ಎಲ್ಲಾ ಶಾಲೆಯಲ್ಲಿಯೂ ಕ್ರಿಯಾಶೀಲ ಶಿಕ್ಷಕರು ಸಿಗುವುದು ಕಷ್ಟ. ಕ್ರಿಯಾಶೀಲ ಮಾಡುವುದು ಇಲಾಖೆಗೆ ಕಷ್ಟಕರವಲ್ಲದ ಸಂಗತಿ ಎನ್ನುವುದು ನಾನು ಹೇಳದೇ ಇರಲಾರೆ. ವ್ಯವಸ್ಥೆಯಲ್ಲಿ ಸಿಲುಕಿರುವ ಕ್ರಿಯಾಶೀಲ ಶಿಕ್ಷಕರು ಇಂದು ತಮ್ಮ ಉತ್ಸುಕತೆಯನ್ನು ಕಳೆದುಕೊಳ್ಳುತ್ತಿದ್ದಾರೆ, ಈ ಕುರಿತು ಇಲಾಖೆ ಚಿಂತಿಸಲಿ ಎಂದು ಹೇಳುತ್ತ ನನ್ನ ಅಂತರಾಳದ ಅನಿಸಿಕೆಗಳಿಗೆ ವಿರಾಮ ನೀಡುತ್ತೇನೆ.
ಲೇಖಕರು
ರಾಜು ಸಾ. ರುದ್ರಗೌಡರ ಎಂ.ಎ., ಬಿ.ಇಡಿ.
ಸಹ ಶಿಕ್ಷಕರು
ಕೆ.ಎಚ್.ಪಿ.ಎಸ್. ಕೋಥಳಿ
ತಾ ಚಿಕ್ಕೊಡಿ ಜಿ. ಬೆಳಗಾವಿ
ಮೊ.9731578106